Saturday, December 6, 2008

ನಮ್ಮ ಕರ್ನಾಟಕ ಸಾಮ್ರಾಜ್ಯ!


ಕನ್ನಡಿಗರ ಇತಿಹಾಸದಲ್ಲಿ ಅತ್ಯಂತ ವೈಭವದ ಕಾಲಕ್ಕೆ, ನಮ್ಮ ಹಿರಿಮೆಯ ಉತ್ತುಂಗಕ್ಕೆ ಸಾಕ್ಷಿಯಾದ ಮಹಾಸಾಮ್ರಾಜ್ಯದ ಹೆಸರು ವಿಜಯನಗರವೆಂದು ಇತ್ತೀಚಿನ ದಿನಗಳಲ್ಲಿ ಕೆಲವಿದ್ವಾಂಸರು ಹೇಳ್ತಿದಾರೆ. ಅದುನ್ನೇ ಸಾಮಾನ್ಯ ಜನರ ಮನಸಲ್ಲೂ ತುಂಬ್ತಿದಾರೆ.ಆದರೆ ನಿಜ ಏನಪ್ಪಾ ಅಂದ್ರೆ ಈ ಮಹಾಸಾಮ್ರಾಜ್ಯದ ಹೆಸರು ವಿಜಯನಗರವಲ್ಲ.. ಅದು ಕರ್ನಾಟಕ ಸಾಮ್ರಾಜ್ಯ.

ಹಕ್ಕಬುಕ್ಕರ ಕಾಲದ ನೂರಾರು ಶಾಸನಗಳನ್ನು ಅಧ್ಯಯನ ಮಾಡಿ ನಂತರ ಈ ನಿಲುವಿಗೆ ಬರಲಾಗಿದೆ. ಅದೆಂಗಪ್ಪಾ ಅನ್ನೋರಿಗೆ ಒಂದೆರಡು ಸಣ್ಣ ಉದಾಹರಣೆಗಳು ಗುರು! ಶ್ರೀ ಕೃಷ್ಣದೇವರಾಯನ ಬಿರುದು "ಕನ್ನಡ ರಾಜ್ಯ ರಮಾರಮಣ" ಎಂದು, ಈ ಸಾಮ್ರಾಜ್ಯದ ಸಿಂಹಾಸನಕ್ಕೆ ’ಕರ್ನಾಟಕ ರತ್ನ ಸಿಂಹಾಸನ’ವೆಂದೂ ಕರ್ದಿರೋದೆ ಇದಕ್ಕೆ ಸಾಕ್ಷಿ. ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿದ್ಯಾನಗರ, ಬಿಜನಗರ, ಅಂದರೆ ವಿಜಯನಗರ. ರಾಜಋಷಿ ವಿದ್ಯಾರಣ್ಯರ ನೆನಪಲ್ಲಿ (ಅವರ ಗುರುಗಳಾದ ವಿದ್ಯಾತೀರ್ಥರ ನೆನಪಲ್ಲಿ ಅಂತಲೂ ಪ್ರತೀತಿ ಇದೆ) ಇದರ ರಾಜಧಾನಿಯನ್ನು ವಿದ್ಯಾನಗರವೆಂದು ಹೆಸರಿಸಲಾಯಿತು ಎನ್ನುತ್ತಾರೆ.

ಹೆಸರಲ್ಲೇ ಎಲ್ಲಾ ಇದೆ!

ಅಲ್ರೀ, ಅದುನ್ನ ವಿಜಯನಗರ ಸಾಮ್ರಾಜ್ಯ ಅಂದರೇನು? ಕರ್ನಾಟಕ ಸಾಮ್ರಾಜ್ಯ ಅಂದರೇನು? ಹೆಸರಲ್ಲೇನಿದೆ ಅನ್ನಿಸಬಹುದು. ಆದರೆ ಇದು ಕರ್ನಾಟಕ ಸಾಮ್ರಾಜ್ಯ ಎನ್ನುವುದಾದರೆ ಇದು ನಮ್ಮದು ಎಂಬ ಹೆಮ್ಮೆ ಮೇರೆ ಮೀರುತ್ತದೆ. ಕೆಲ ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ತೆರೆಕಂಡ ಚಲನಚಿತ್ರವೊಂದರಲ್ಲಿ ಅದರ ನಾಯಕ, ಹಂಪೆಯ ಒಂದು ದಿಬ್ಬದ ಮೇಲೆ ನಿಂತು "ಇದಿ ಮನ ವಿಜಯನಗರ ಸಾಮ್ರಾಜ್ಯಮು" ಅನ್ನೋ ಡೈಲಾಗ್ ಹೊಡ್ಯೋ ದೃಶ್ಯವಿತ್ತು. ಕೆಲ ದಶಕಗಳ ಹಿಂದಿನವರೆಗೂ ಇಡೀ ವಿಜಯನಗರ ಸಾಮ್ರಾಜ್ಯ ತೆಲುಗರದ್ದೆಂದೂ ಬಿಂಬಿಸಲಾಗುತ್ತಿತ್ತು. ಆ ವಾದವನ್ನೇ ಮುಂದಿಟ್ಟುಕೊಂಡು ಆಂಧ್ರರು ಬಳ್ಳಾರಿ ಜಿಲ್ಲೆಯನ್ನೇ ಕಬಳಿಸಲು ಮುಂದಾಗಿದ್ದರು ಅನ್ನುವುದನ್ನೆಲ್ಲಾ ನೆನಪಿಸಿಕೊಂಡರೆ ಹೆಸರಿನ ಮಹತ್ವ ಅರ್ಥವಾಗುತ್ತದೆ. ಅಂದ್ರೆ ಹೆಸರಲ್ಲೇ ಎಲ್ಲಾ ಇದೆ.

ಎದೆಯುಬ್ಬಿಸಿ ಹೇಳೋ... ಕನ್ನಡಿಗಾ!

ಇಗೋ ಇದು ನಮ್ಮ ಕರ್ನಾಟಕ ಸಾಮ್ರಾಜ್ಯ. ಈ ಸಾಮ್ರಾಜ್ಯದ ಒಡೆಯರು ಕನ್ನಡಿಗರು. ಈ ಸಿಂಹಾಸನ ಕರ್ನಾಟಕ ರತ್ನ ಸಿಂಹಾಸನ. ಇದನ್ನೇರಿದ ಶ್ರೀಕೃಷ್ಣದೇವರಾಯ ಕನ್ನಡ ರಾಜ್ಯ ರಮಾರಮಣ... ಈ ನಮ್ಮ ಸಾಮ್ರಾಜ್ಯ ಮೂರುಕಡಲಗಳ ಉದ್ದಗಲಕ್ಕೂ ಹರಡಿತ್ತು ಅನ್ನುವುದೆಲ್ಲಾ ನಮ್ಮಲ್ಲಿ ಸ್ಪೂರ್ತಿಯ ಸೆಲೆಯುಕ್ಕಲು ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲಾ ಗುರು!

No comments: