Saturday, December 6, 2008

ವಿಶ್ವೇಶ್ವರಯ್ಯನವರಿಗೆ ನಮನ!


ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಂಥಾ ಪುಟ್ಟ ಹಳ್ಳೀಲಿ ಹುಟ್ಟಿದ ಕನ್ನಡಿಗರ ಹೆಮ್ಮೆಯ ದಾರ್ಶನಿಕ ಸರ್.ಎಂ.ವಿಶ್ವೇಶ್ವರಯ್ಯನವರ ಒಂದು ನೂರಾ ನಲವತ್ತೆಂಟನೇ ಹುಟ್ಟುಹಬ್ಬ ನಿನ್ನೆ ತಾನೆ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ನೆನೆದು ನಮ್ಮ ಗೌರವಗಳನ್ನು ಸಲ್ಲಿಸುತ್ತೇವೆ. ಆದ್ರೆ ಇವರನ್ನು ಏನೆಂದು ನೆನೆಯೋಣ? ಏನೇನೆಂದು ನೆನೆಯೋಣ ಗುರು!?

ಸರ್ ಎಂ.ವಿ. ಎಂಬ ....

ಇವರು ತಮ್ಮ ತಾಂತ್ರಿಕ ನೈಪುಣ್ಯದಿಂದ ಅಣೆಕಟ್ಟೆಯ ಗೇಟ್ ವಿನ್ಯಾಸ ಮಾಡಿ ಪೇಟೆಂಟ್ ಪಡೆದಿದ್ದ ತಾಂತ್ರಿಕ ನಿಪುಣರೆಂದೇ? ಲೋಕೋಪಯೋಗಿ ಇಂಜಿನಿಯರ್ ಆಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ ಒಳ್ಳೆಯ ಆಡಳಿತಗಾರರೆಂದೇ? ನಾಡಿನ ಏಳಿಗೆಗೆ ಅಗತ್ಯವಾಗಿರೋ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಶಿಕ್ಷಣ ತಜ್ಞರೆಂದೇ? ಕನ್ನಡ ನಾಡಿನ ಏಕೀಕರಣಕ್ಕೆ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಸಾಹಿತ್ಯ ಲೋಕದ ದಿಗ್ಗಜರೆಂದೇ? ನಾಡೊಂದಾಗಲೆಂಬ ಮುಂದಾಲೋಚನೆಯ ರಾಜಕಾರಣಿಯೆಂದೇ?

ತನ್ನ ಬದುಕಿನಲ್ಲಿ ಶಿಸ್ತಿಗೆ ಮಹತ್ವ ಕೊಟ್ಟ ತನ್ನ ಮತ್ತು ಉಳಿದವರ ಸಮಯದ ಬೆಲೆ ಅರಿತು ಸದಾ ಸಮಯಪಾಲನೆ ಮಾಡುತ್ತಿದ್ದ ಶಿಸ್ತುಗಾರರೆಂದೇ? ತನ್ನವರನ್ನೆಲ್ಲಾ ಕರೆದು ದಿವಾನರಾಗುವ ಮೊದಲು ವಶೀಲಿ ಮಾಡುವಂತೆ ಒತ್ತಾಯಿಸಬೇಡಿ ಎಂದು ನಿಷ್ಠುರವಾಗಿ ನಡೆದ ನ್ಯಾಯ ಪಕ್ಷಪಾತಿಯೆಂದೇ? ತನ್ನ ಸ್ವಂತ ಹಣವನ್ನೂ ನಾಡಿನ ಕೆಲಸಕ್ಕಾಗಿ ಖರ್ಚು ಮಾಡಲು ಹಿಂದುಮುಂದು ನೋಡದ ನಿಷ್ಠಾವಂತರೆಂದೇ? ತನ್ನ ವೈಯುಕ್ತಿಕ ಕೆಲಸಕ್ಕಾಗಿ ಸ್ವಂತದ ಪೆನ್ನು, ಕಛೇರಿ ಕೆಲಸಕ್ಕೆ ಕಛೇರಿ ಪೆನ್ನು ಬಳಸುತ್ತಿದ್ದ ಪ್ರಾಮಾಣಿಕತೆಯ ಶಿಖರವೆಂದೇ?

ನಾಡಿನಲ್ಲಿ ಇಂದು ಇರುವ ಸಂಪನ್ಮೂಲಗಳೇನು, ಅವನ್ನು ಸರಿಯಾಗಿ ಬಳಸಿಕೊಳ್ಳಲು ಗಣಿಗಾರಿಕೆ, ಉಕ್ಕು ಕಾರ್ಖಾನೆ ಸ್ಥಾಪಿಸಿದವರೇ ಇವರು. ನಾಡಿನ ಜನತೆ ಇಂದು ವ್ಯವಸಾಯವನ್ನು ಮುಖ್ಯವಾಗಿ ನಂಬಿದ್ದಾರೆ, ಹಾಗಾಗಿ ನೀರಾವರಿಗೆ ಆದ್ಯತೆ ಕೊಡಬೇಕೆಂದು ಅಣೆಕಟ್ಟೆ ನಿರ್ಮಾಣವನ್ನು, ಆಧುನಿಕ ವ್ಯವಸಾಯ ಪದ್ದತಿಗಳನ್ನು ಪ್ರೋತ್ಸಾಹಿಸಿದ ಮುಂದಾಲೋಚನೆ ಹೊಂದಿದ ಮುಂದಾಳೆಂದೇ? ನಮ್ಮ ಜನ ರೇಶ್ಮೆ ಬೆಳೆಯಲ್ಲಿ ನಿಸ್ಸೀಮರು, ಇದಕ್ಕೆ ಸೂಕ್ತ ಉತ್ಪಾದನೆ ಮತ್ತು ಮಾರಾಟದ ಸಾಧನವಾಗೋ ಸಂಸ್ಥೆ ಬೇಕು ಎಂದು ರೇಶ್ಮೆ ಉದ್ದಿಮೆಯನ್ನು, ಸಂಬಂಧಪಟ್ಟ ಕೈಗಾರಿಕೆಗಳನ್ನೂ ಕಟ್ಟಿದ ಆಧುನಿಕ ನಾಯಕರೆಂದೇ? ಇರುವ ಸಂಪನ್ಮೂಲದ ಜೊತೆ ತಂತ್ರಜ್ಞಾನದಲ್ಲೂ ಮುಂದಾಗಬೇಕು ನಮ್ಮ ನಾಡು ಎಂದು ೧೯೩೦ರ ದಶಕದಲ್ಲೇ ಕಾರು ಕಾರ್ಖಾನೆ ಸ್ಥಾಪಿಸಲು ಮುಂದಾದವರೆಂದೇ? ಹಿಂದುಸ್ಥಾನ್ ವಿಮಾನ ಕಾರ್ಖಾನೆಯನ್ನು ವಿಮಾನ ವಿಜ್ಞಾನ ಇನ್ನೂ ಅಂಬೆಗಾಲಿಡುತ್ತಿದ್ದಾಗಲೇ ಸ್ಥಾಪಿಸಲು ಕಾರಣರಾದ ವಿಜ್ಞಾನಿಯೆಂದೇ? ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಸಲು ಇಡೀ ಏಷ್ಯಾ-ಖಂಡದ ಮೊದಲ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಕಾರಣರಾದ ನಾಡಿನ ಬೆಳಕೆಂದೇ? ಬಹಳ ಕಡಿಮೆ ಜನ ಸಾಬೂನು ಬಳಸುತ್ತಿದ್ದ ಆ ದಿನಗಳಲ್ಲೇ ಮುಂದೆ ಒದಗಬಹುದಾದ ಮಾರುಕಟ್ಟೆಯನ್ನು ಗುರುತಿಸಿ, ನಮ್ಮ ನಾಡಲ್ಲೇ ಹೆಚ್ಚು ಸಿಗುತ್ತಿದ್ದ ಗಂಧದೆಣ್ಣೆಯ ವಿಶೇಷತೆಯನ್ನು ಮಾರುಕಟ್ಟೆ ಗೆಲ್ಲುವ ಸಾಧನವಾಗಿ ಬಳಸಿದ ಮಹಾನ್ ಉದ್ದಿಮೆದಾರರೆಂದೇ? ನಮ್ಮ ಜನರ ಏಳಿಗೆಗೆ ಇಂದಿನ ಹಣಕಾಸು ಬೆಂಬಲ ಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬ್ಯಾಂಕ್ ಹುಟ್ಟುಹಾಕಿದ ಆರ್ಥಿಕ ತಜ್ಞರೆಂದೇ? ಏನೆಂದು ನೆನೆಯೋಣ ಗುರು?

ನಾಡುಕಟ್ಟೋರಿಗೆ ಏನೆಲ್ಲಾ ಮುನ್ನೋಟಗಳು, ಏನೆಲ್ಲಾ ಸಾಮರ್ಥ್ಯಗಳು ಇರಬೇಕೆಂದು ತೋರಿಸಿಕೊಟ್ಟ ಕನ್ನಡ ನಾಡಿನ ಹೆಮ್ಮೆಯ ದೇವ ಮಾನವರೆಂದೇ? ಇವೆಲ್ಲವೂ ಆಗಿರುವ ನಮ್ಮಲ್ಲಿ ಸದಾ ಸ್ಪೂರ್ತಿ ತುಂಬುವ ಚೈತನ್ಯವೆಂದೇ?

No comments: