Saturday, December 6, 2008

ಹಲ್ಮಿಡಿಗೆ ಒಮ್ಮೆ ಹೋಗಿಬನ್ನಿ!


ಕನ್ನಡದ ಅತ್ಯಂತ ಹಳೆಯ ಬರವಣಿಗೆ ಅಂದ್ರೆ ಶಾಸನ ರೂಪದಲ್ಲಿರೋ ಹಲ್ಮಿಡಿ ಶಾಸನ. ಇದು ಕನ್ನಡದ ಹಳಮೆಯನ್ನು ದಾಖಲಿಸಿರೋ ಮೊಟ್ಟಮೊದಲ ಶಾಸನ. ಇದು ಸಿಕ್ಕಿದ ಜಾಗದ ಹೆಸರು ಹಲ್ಮಿಡಿ. ಹಾಗಾಗಿ ಇದನ್ನು ಹಲ್ಮಿಡಿ ಶಾಸನ ಅಂತಾನೆ ಕರೀತಾರೆ. ಈ ಶಾಸನವು ಕದಂಬರ ಕಾಲಕ್ಕೆ ಸೇರಿದ್ದು ಸುಮಾರು ಕ್ರಿ.ಶ.೪೫೦ರ ಕಾಲದ್ದೆಂದು ಹೇಳಲಾಗಿದೆ. ಹದಿನಾರು ಸಾಲುಗಳ ಈ ಶಾಸನದಲ್ಲಿ ಪಲ್ಲವರ ವಿರುದ್ಧ ಯುದ್ಧಗಳನ್ನು ಗೆಲ್ಲಿಸಿಕೊಟ್ಟ ವಿಜಾ ಅರಸನೆಂಬ ಒಬ್ಬ ಯೋಧನಿಗೆ ನೀಡಲಾದ ಭೂಮಿ ಕಾಣಿಕೆಗಳ ಬಗ್ಗೆ ವಿವರ ಇದೆ.
ಹಲ್ಮಿಡಿ ಶಾಸನದಲ್ಲಿರೋದೇನು?
ಹಿಂದೆ ಕದಂಬ ದೊರೆ ಕಾಕುಸ್ಥ ವರ್ಮನ ಅಧಿಕಾರಿಗಳಾಗಿ ಬಲು ಶೂರರಾದ ನಾಗ ಮತ್ತು ಮೃಗೇಶ ಅನ್ನೋರಿದ್ರು. ಜೊತೆಗೆ ಪಶುಪತಿ ಅನ್ನೋ ಮತ್ತೊಬ್ಬನೂ ಇದ್ದ. ಬಾಣರು ಮತ್ತು ಸೇಂದ್ರಕರ ಸೈನ್ಯಗಳನ್ನು ಕೂಡಿಸಿಕೊಂಡು ಇವರು ನೂರಾರು ಯುದ್ಧಗಳನ್ನು ಕೇಕಯ ಪಲ್ಲವರೆದುರು ಮಾಡಿದ್ದರು. ಈ ಸೈನ್ಯದಲ್ಲಿದ್ದು ತನ್ನ ಪರಾಕ್ರಮದಿಂದ ಅನೇಕ ಯುದ್ಧಗಳನ್ನು ವಿಜಾ ಅರಸ ಎನ್ನುವ ಯೋಧನೊಬ್ಬ ಗೆಲ್ಲಿಸಿಕೊಟ್ಟಿದ್ದ. ಯುದ್ಧಗಳೆಲ್ಲಾ ಮುಗಿದ ಮೇಲೆ ರಕ್ತಸಿಕ್ತವಾದ ಖಡ್ಗವನ್ನು ತೊಳೆದು ಯೋಧರನ್ನು ಗೌರವಿಸೋದು ಆಗಿನ ಕಾಲದ ಒಂದು ಸಂಪ್ರದಾಯ. ಅದರಂತೆ ಬಾಣ ಮತ್ತು ಸೇಂದ್ರಕ ಸೈನ್ಯದ ಎದುರು ವಿಜಾ ಅರಸನನ್ನು ಗೌರವಿಸಿ ಸನ್ಮಾನ ಮಾಡಿ ಹಲ್ಮಿಡಿ ಮತ್ತು ಮುಗುಳವಳ್ಳಿ ಎಂಬ ಹಳ್ಳಿಗಳನ್ನು ದಾನ ಮಾಡಲಾಯಿತು. ಈ ದಾನ ಪತ್ರವೇ ಹಲ್ಮಿಡಿ ಶಾಸನವಾಗಿದೆ.

ಹೀಗೆ ಹೋಗಬೇಕು ಹಲ್ಮಿಡಿಗೆ!

ಮೂಲ ಶಾಸನವನ್ನು ಬೆಂಗಳೂರಿನಲ್ಲಿರುವ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಹಲ್ಮಿಡಿಯಲ್ಲಿ ಸ್ಮಾರಕ ನಿಲ್ಲಿಸಲಾಗಿದೆ. ಬೇಲೂರು ಹಳೆಬೀಡುಗಳನ್ನು ನೋಡಲು ಹೋಗೋರು ಬೇಲೂರಿನಿಂದ ಚಿಕ್ಕಮಗಳೂರಿನ ಕಡೆ ಹೋಗಬೇಕು. ದಾರಿಯಲ್ಲಿ ಹನ್ನೆರಡು ಕಿಲೋಮೀಟರ್ ಸಾಗಿದ ನಂತರ ಕೋಡನಹಳ್ಳಿ ಅಂತಾ ಸಿಗುತ್ತೆ. ಅಲ್ಲೇ ಹತ್ತಿರದಲ್ಲಿ ಚನ್ನಾಪುರ ಕ್ರಾಸ್ ಸಿಗುತ್ತೆ. ಅಲ್ಲಿಂದ ಎಡಕ್ಕೆ ತಿರುಗಿ ಆರು ಕಿಲೋಮೀಟರ್ ಹೋದರೆ ಅಲ್ಲಿದೆ ಹಲ್ಮಿಡಿ. ಇದನ್ನು ಹನುಮಿಡಿ ಅಂತಲೂ ಅಂತಾರೆ. ಅಲ್ಲಿಗೆ ಹೋಗೋ ದಾರಿ ಚನ್ನಾಪುರದ ತನಕ ಹೆದ್ದಾರಿಯಾಗಿದ್ದು ನುಣುಪಾಗಿ ಚೆನ್ನಾಗಿದೆ. ಒಳಗಿನ ಆರು ಕಿ.ಮೀ ಮಾತ್ರಾ ಸ್ವಲ್ಪ ತರಿ ತರಿಯಾಗಿದೆ. ಮುಂದಿನ ಸಾರಿ ಬೇಲೂರಿಗೆ ಹೋಗೋವಾಗ ತಪ್ಪದೇ ಹಲ್ಮಿಡಿಗೆ ಹೋಗಿಬನ್ನಿ. ಅಲ್ಲಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಹೋಗಿ ಬರ್ತಾ ಇದ್ರೆ, ಸರ್ಕಾರ ಪ್ರವಾಸಿ ಕೇಂದ್ರವನ್ನಾಗಿಯೂ ಅದನ್ನು ಬೆಳಸಕ್ಕೆ ಮುಂದಾಗುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ’ಕನ್ನಡದ ಮೊಟ್ಟಮೊದಲ ಶಾಸನ ಸಿಕ್ಕ ಜಾಗ’ ನಮಗೆಲ್ಲ ಸ್ಪೂರ್ತಿ ಕೊಡೋದ್ರಲ್ಲಿ ಸಂದೇಹಾನೆ ಇಲ್ಲಾ ಗುರು.

ನಮ್ಮ ಕರ್ನಾಟಕ ಸಾಮ್ರಾಜ್ಯ!


ಕನ್ನಡಿಗರ ಇತಿಹಾಸದಲ್ಲಿ ಅತ್ಯಂತ ವೈಭವದ ಕಾಲಕ್ಕೆ, ನಮ್ಮ ಹಿರಿಮೆಯ ಉತ್ತುಂಗಕ್ಕೆ ಸಾಕ್ಷಿಯಾದ ಮಹಾಸಾಮ್ರಾಜ್ಯದ ಹೆಸರು ವಿಜಯನಗರವೆಂದು ಇತ್ತೀಚಿನ ದಿನಗಳಲ್ಲಿ ಕೆಲವಿದ್ವಾಂಸರು ಹೇಳ್ತಿದಾರೆ. ಅದುನ್ನೇ ಸಾಮಾನ್ಯ ಜನರ ಮನಸಲ್ಲೂ ತುಂಬ್ತಿದಾರೆ.ಆದರೆ ನಿಜ ಏನಪ್ಪಾ ಅಂದ್ರೆ ಈ ಮಹಾಸಾಮ್ರಾಜ್ಯದ ಹೆಸರು ವಿಜಯನಗರವಲ್ಲ.. ಅದು ಕರ್ನಾಟಕ ಸಾಮ್ರಾಜ್ಯ.

ಹಕ್ಕಬುಕ್ಕರ ಕಾಲದ ನೂರಾರು ಶಾಸನಗಳನ್ನು ಅಧ್ಯಯನ ಮಾಡಿ ನಂತರ ಈ ನಿಲುವಿಗೆ ಬರಲಾಗಿದೆ. ಅದೆಂಗಪ್ಪಾ ಅನ್ನೋರಿಗೆ ಒಂದೆರಡು ಸಣ್ಣ ಉದಾಹರಣೆಗಳು ಗುರು! ಶ್ರೀ ಕೃಷ್ಣದೇವರಾಯನ ಬಿರುದು "ಕನ್ನಡ ರಾಜ್ಯ ರಮಾರಮಣ" ಎಂದು, ಈ ಸಾಮ್ರಾಜ್ಯದ ಸಿಂಹಾಸನಕ್ಕೆ ’ಕರ್ನಾಟಕ ರತ್ನ ಸಿಂಹಾಸನ’ವೆಂದೂ ಕರ್ದಿರೋದೆ ಇದಕ್ಕೆ ಸಾಕ್ಷಿ. ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿದ್ಯಾನಗರ, ಬಿಜನಗರ, ಅಂದರೆ ವಿಜಯನಗರ. ರಾಜಋಷಿ ವಿದ್ಯಾರಣ್ಯರ ನೆನಪಲ್ಲಿ (ಅವರ ಗುರುಗಳಾದ ವಿದ್ಯಾತೀರ್ಥರ ನೆನಪಲ್ಲಿ ಅಂತಲೂ ಪ್ರತೀತಿ ಇದೆ) ಇದರ ರಾಜಧಾನಿಯನ್ನು ವಿದ್ಯಾನಗರವೆಂದು ಹೆಸರಿಸಲಾಯಿತು ಎನ್ನುತ್ತಾರೆ.

ಹೆಸರಲ್ಲೇ ಎಲ್ಲಾ ಇದೆ!

ಅಲ್ರೀ, ಅದುನ್ನ ವಿಜಯನಗರ ಸಾಮ್ರಾಜ್ಯ ಅಂದರೇನು? ಕರ್ನಾಟಕ ಸಾಮ್ರಾಜ್ಯ ಅಂದರೇನು? ಹೆಸರಲ್ಲೇನಿದೆ ಅನ್ನಿಸಬಹುದು. ಆದರೆ ಇದು ಕರ್ನಾಟಕ ಸಾಮ್ರಾಜ್ಯ ಎನ್ನುವುದಾದರೆ ಇದು ನಮ್ಮದು ಎಂಬ ಹೆಮ್ಮೆ ಮೇರೆ ಮೀರುತ್ತದೆ. ಕೆಲ ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ತೆರೆಕಂಡ ಚಲನಚಿತ್ರವೊಂದರಲ್ಲಿ ಅದರ ನಾಯಕ, ಹಂಪೆಯ ಒಂದು ದಿಬ್ಬದ ಮೇಲೆ ನಿಂತು "ಇದಿ ಮನ ವಿಜಯನಗರ ಸಾಮ್ರಾಜ್ಯಮು" ಅನ್ನೋ ಡೈಲಾಗ್ ಹೊಡ್ಯೋ ದೃಶ್ಯವಿತ್ತು. ಕೆಲ ದಶಕಗಳ ಹಿಂದಿನವರೆಗೂ ಇಡೀ ವಿಜಯನಗರ ಸಾಮ್ರಾಜ್ಯ ತೆಲುಗರದ್ದೆಂದೂ ಬಿಂಬಿಸಲಾಗುತ್ತಿತ್ತು. ಆ ವಾದವನ್ನೇ ಮುಂದಿಟ್ಟುಕೊಂಡು ಆಂಧ್ರರು ಬಳ್ಳಾರಿ ಜಿಲ್ಲೆಯನ್ನೇ ಕಬಳಿಸಲು ಮುಂದಾಗಿದ್ದರು ಅನ್ನುವುದನ್ನೆಲ್ಲಾ ನೆನಪಿಸಿಕೊಂಡರೆ ಹೆಸರಿನ ಮಹತ್ವ ಅರ್ಥವಾಗುತ್ತದೆ. ಅಂದ್ರೆ ಹೆಸರಲ್ಲೇ ಎಲ್ಲಾ ಇದೆ.

ಎದೆಯುಬ್ಬಿಸಿ ಹೇಳೋ... ಕನ್ನಡಿಗಾ!

ಇಗೋ ಇದು ನಮ್ಮ ಕರ್ನಾಟಕ ಸಾಮ್ರಾಜ್ಯ. ಈ ಸಾಮ್ರಾಜ್ಯದ ಒಡೆಯರು ಕನ್ನಡಿಗರು. ಈ ಸಿಂಹಾಸನ ಕರ್ನಾಟಕ ರತ್ನ ಸಿಂಹಾಸನ. ಇದನ್ನೇರಿದ ಶ್ರೀಕೃಷ್ಣದೇವರಾಯ ಕನ್ನಡ ರಾಜ್ಯ ರಮಾರಮಣ... ಈ ನಮ್ಮ ಸಾಮ್ರಾಜ್ಯ ಮೂರುಕಡಲಗಳ ಉದ್ದಗಲಕ್ಕೂ ಹರಡಿತ್ತು ಅನ್ನುವುದೆಲ್ಲಾ ನಮ್ಮಲ್ಲಿ ಸ್ಪೂರ್ತಿಯ ಸೆಲೆಯುಕ್ಕಲು ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲಾ ಗುರು!

ವಿಶ್ವೇಶ್ವರಯ್ಯನವರಿಗೆ ನಮನ!


ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಂಥಾ ಪುಟ್ಟ ಹಳ್ಳೀಲಿ ಹುಟ್ಟಿದ ಕನ್ನಡಿಗರ ಹೆಮ್ಮೆಯ ದಾರ್ಶನಿಕ ಸರ್.ಎಂ.ವಿಶ್ವೇಶ್ವರಯ್ಯನವರ ಒಂದು ನೂರಾ ನಲವತ್ತೆಂಟನೇ ಹುಟ್ಟುಹಬ್ಬ ನಿನ್ನೆ ತಾನೆ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ನೆನೆದು ನಮ್ಮ ಗೌರವಗಳನ್ನು ಸಲ್ಲಿಸುತ್ತೇವೆ. ಆದ್ರೆ ಇವರನ್ನು ಏನೆಂದು ನೆನೆಯೋಣ? ಏನೇನೆಂದು ನೆನೆಯೋಣ ಗುರು!?

ಸರ್ ಎಂ.ವಿ. ಎಂಬ ....

ಇವರು ತಮ್ಮ ತಾಂತ್ರಿಕ ನೈಪುಣ್ಯದಿಂದ ಅಣೆಕಟ್ಟೆಯ ಗೇಟ್ ವಿನ್ಯಾಸ ಮಾಡಿ ಪೇಟೆಂಟ್ ಪಡೆದಿದ್ದ ತಾಂತ್ರಿಕ ನಿಪುಣರೆಂದೇ? ಲೋಕೋಪಯೋಗಿ ಇಂಜಿನಿಯರ್ ಆಗಿ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಯೋಜನೆಗಳನ್ನು ಜಾರಿಗೊಳಿಸಿದ ಒಳ್ಳೆಯ ಆಡಳಿತಗಾರರೆಂದೇ? ನಾಡಿನ ಏಳಿಗೆಗೆ ಅಗತ್ಯವಾಗಿರೋ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಶಿಕ್ಷಣ ತಜ್ಞರೆಂದೇ? ಕನ್ನಡ ನಾಡಿನ ಏಕೀಕರಣಕ್ಕೆ ಒಂದು ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿದ ಸಾಹಿತ್ಯ ಲೋಕದ ದಿಗ್ಗಜರೆಂದೇ? ನಾಡೊಂದಾಗಲೆಂಬ ಮುಂದಾಲೋಚನೆಯ ರಾಜಕಾರಣಿಯೆಂದೇ?

ತನ್ನ ಬದುಕಿನಲ್ಲಿ ಶಿಸ್ತಿಗೆ ಮಹತ್ವ ಕೊಟ್ಟ ತನ್ನ ಮತ್ತು ಉಳಿದವರ ಸಮಯದ ಬೆಲೆ ಅರಿತು ಸದಾ ಸಮಯಪಾಲನೆ ಮಾಡುತ್ತಿದ್ದ ಶಿಸ್ತುಗಾರರೆಂದೇ? ತನ್ನವರನ್ನೆಲ್ಲಾ ಕರೆದು ದಿವಾನರಾಗುವ ಮೊದಲು ವಶೀಲಿ ಮಾಡುವಂತೆ ಒತ್ತಾಯಿಸಬೇಡಿ ಎಂದು ನಿಷ್ಠುರವಾಗಿ ನಡೆದ ನ್ಯಾಯ ಪಕ್ಷಪಾತಿಯೆಂದೇ? ತನ್ನ ಸ್ವಂತ ಹಣವನ್ನೂ ನಾಡಿನ ಕೆಲಸಕ್ಕಾಗಿ ಖರ್ಚು ಮಾಡಲು ಹಿಂದುಮುಂದು ನೋಡದ ನಿಷ್ಠಾವಂತರೆಂದೇ? ತನ್ನ ವೈಯುಕ್ತಿಕ ಕೆಲಸಕ್ಕಾಗಿ ಸ್ವಂತದ ಪೆನ್ನು, ಕಛೇರಿ ಕೆಲಸಕ್ಕೆ ಕಛೇರಿ ಪೆನ್ನು ಬಳಸುತ್ತಿದ್ದ ಪ್ರಾಮಾಣಿಕತೆಯ ಶಿಖರವೆಂದೇ?

ನಾಡಿನಲ್ಲಿ ಇಂದು ಇರುವ ಸಂಪನ್ಮೂಲಗಳೇನು, ಅವನ್ನು ಸರಿಯಾಗಿ ಬಳಸಿಕೊಳ್ಳಲು ಗಣಿಗಾರಿಕೆ, ಉಕ್ಕು ಕಾರ್ಖಾನೆ ಸ್ಥಾಪಿಸಿದವರೇ ಇವರು. ನಾಡಿನ ಜನತೆ ಇಂದು ವ್ಯವಸಾಯವನ್ನು ಮುಖ್ಯವಾಗಿ ನಂಬಿದ್ದಾರೆ, ಹಾಗಾಗಿ ನೀರಾವರಿಗೆ ಆದ್ಯತೆ ಕೊಡಬೇಕೆಂದು ಅಣೆಕಟ್ಟೆ ನಿರ್ಮಾಣವನ್ನು, ಆಧುನಿಕ ವ್ಯವಸಾಯ ಪದ್ದತಿಗಳನ್ನು ಪ್ರೋತ್ಸಾಹಿಸಿದ ಮುಂದಾಲೋಚನೆ ಹೊಂದಿದ ಮುಂದಾಳೆಂದೇ? ನಮ್ಮ ಜನ ರೇಶ್ಮೆ ಬೆಳೆಯಲ್ಲಿ ನಿಸ್ಸೀಮರು, ಇದಕ್ಕೆ ಸೂಕ್ತ ಉತ್ಪಾದನೆ ಮತ್ತು ಮಾರಾಟದ ಸಾಧನವಾಗೋ ಸಂಸ್ಥೆ ಬೇಕು ಎಂದು ರೇಶ್ಮೆ ಉದ್ದಿಮೆಯನ್ನು, ಸಂಬಂಧಪಟ್ಟ ಕೈಗಾರಿಕೆಗಳನ್ನೂ ಕಟ್ಟಿದ ಆಧುನಿಕ ನಾಯಕರೆಂದೇ? ಇರುವ ಸಂಪನ್ಮೂಲದ ಜೊತೆ ತಂತ್ರಜ್ಞಾನದಲ್ಲೂ ಮುಂದಾಗಬೇಕು ನಮ್ಮ ನಾಡು ಎಂದು ೧೯೩೦ರ ದಶಕದಲ್ಲೇ ಕಾರು ಕಾರ್ಖಾನೆ ಸ್ಥಾಪಿಸಲು ಮುಂದಾದವರೆಂದೇ? ಹಿಂದುಸ್ಥಾನ್ ವಿಮಾನ ಕಾರ್ಖಾನೆಯನ್ನು ವಿಮಾನ ವಿಜ್ಞಾನ ಇನ್ನೂ ಅಂಬೆಗಾಲಿಡುತ್ತಿದ್ದಾಗಲೇ ಸ್ಥಾಪಿಸಲು ಕಾರಣರಾದ ವಿಜ್ಞಾನಿಯೆಂದೇ? ಕೋಲಾರ ಚಿನ್ನದ ಗಣಿಗೆ ವಿದ್ಯುತ್ ಪೂರೈಸಲು ಇಡೀ ಏಷ್ಯಾ-ಖಂಡದ ಮೊದಲ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಕಾರಣರಾದ ನಾಡಿನ ಬೆಳಕೆಂದೇ? ಬಹಳ ಕಡಿಮೆ ಜನ ಸಾಬೂನು ಬಳಸುತ್ತಿದ್ದ ಆ ದಿನಗಳಲ್ಲೇ ಮುಂದೆ ಒದಗಬಹುದಾದ ಮಾರುಕಟ್ಟೆಯನ್ನು ಗುರುತಿಸಿ, ನಮ್ಮ ನಾಡಲ್ಲೇ ಹೆಚ್ಚು ಸಿಗುತ್ತಿದ್ದ ಗಂಧದೆಣ್ಣೆಯ ವಿಶೇಷತೆಯನ್ನು ಮಾರುಕಟ್ಟೆ ಗೆಲ್ಲುವ ಸಾಧನವಾಗಿ ಬಳಸಿದ ಮಹಾನ್ ಉದ್ದಿಮೆದಾರರೆಂದೇ? ನಮ್ಮ ಜನರ ಏಳಿಗೆಗೆ ಇಂದಿನ ಹಣಕಾಸು ಬೆಂಬಲ ಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂಬ ಬ್ಯಾಂಕ್ ಹುಟ್ಟುಹಾಕಿದ ಆರ್ಥಿಕ ತಜ್ಞರೆಂದೇ? ಏನೆಂದು ನೆನೆಯೋಣ ಗುರು?

ನಾಡುಕಟ್ಟೋರಿಗೆ ಏನೆಲ್ಲಾ ಮುನ್ನೋಟಗಳು, ಏನೆಲ್ಲಾ ಸಾಮರ್ಥ್ಯಗಳು ಇರಬೇಕೆಂದು ತೋರಿಸಿಕೊಟ್ಟ ಕನ್ನಡ ನಾಡಿನ ಹೆಮ್ಮೆಯ ದೇವ ಮಾನವರೆಂದೇ? ಇವೆಲ್ಲವೂ ಆಗಿರುವ ನಮ್ಮಲ್ಲಿ ಸದಾ ಸ್ಪೂರ್ತಿ ತುಂಬುವ ಚೈತನ್ಯವೆಂದೇ?

Friday, December 5, 2008

ಉದಯವಾಗಲಿ ಚಲುವ ಕನ್ನಡ ನಾಡು.........

ನಮಸ್ಕಾರ...!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!

ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು

ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ಅಭಿಪ್ರಾಯಗಳು!!

ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

ನಮ್ಮೂರು.........ನಮ್ಮ ರಾಜ್ಯ... ನಮ್ಮ ಜನಗಳು... ಪ್ರಸಿದ್ಧ ವ್ಯಕ್ತಿ..........

ಕರ್ನಾಟಕ, ದಕ್ಷಿಣ ಭಾರತದಲ್ಲಿರುವ ಒಂದು ರಾಜ್ಯ. ಇದರ ಹಿಂದಿನ ಹೆಸರು ಮೈಸೂರು ಸಂಸ್ಥಾನ.ಸುಮರು ೨೦೦೦ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ.ಕರ್ನಾಟಕದ ರಾಜಧಾನಿ ಬೆಂಗಳೂರು.ಇದಕ್ಕೆ ಬಹಳ ಅನ್ವರ್ಥ ನಾಮಗಳಿವೆ. ಉದಾ: ಉದ್ಯಾನ ನಗರ,ಭಾರತದ ಸಿಲಿಕಾನ್ ಕಣಿವೆ ಇತ್ಯಾದಿ.
ಕರ್ನಾಟಕದ ರಾಜ್ಯ ಭಾಷೆ ಕನ್ನಡ.ಕರ್ನಾಟಕವು,ಪುರಾತನ ಭಾರತದ ಅನೇಕ ಪ್ರಸಿದ್ಧ ರಾಜ ವಂಶಸ್ಥರ ತವರೂರಾಗಿತ್ತು.ಕರ್ನಾಟಕವನ್ನು ಆಳಿದ ಪ್ರಮುಖ ರಾಜ ವಂಶಸ್ಥರೆಂದರೆ,ಕದಂಬರು,ಗಂಗರು,ಚಾಲುಕ್ಯರು,ರಾಷ್ತ್ರಕೂಟರು,ಹೊಯ್ಸಳರು,ವಿಜಯನಗರದ ಅರಸರು,ಬಹಮನಿ ಸುಲ್ತಾನರು,ಬಿಜಪುರ ಸುಲ್ತಾನರು,ಮೈಸೂರು ಅರಸರು.
ಭಾರತದ ಪ್ರಸಿದ್ಢ ಶಾಸ್ತ್ರೀಯ ಸಂಗೀತ ಪ್ರಕಾರಗಳಾದ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ.ಕನ್ನಡ ಸಾಹಿತ್ಯಕ್ಕೆ, ಭಾರತದಲ್ಲಿ ಅತೀ ಹೆಚ್ಚು ಜ್ಣಾನಪೀಟ ಪ್ರಶಸ್ತಿಗಳನ್ನು ಪಡೆದ ಗೌರವವಿದೆ.
ಕರ್ನಾಟಕದಲ್ಲಿ ಅನೇಕ ಪ್ರಸಿದ್ಧ ಪ್ರೇಕ್ಶಣೀಯ ಸ್ಥಳಗಳಿವೆ.ಅವುಗಳಲ್ಲಿ ಪ್ರಮುಖವೆಂದರೆ,ಹಂಪೆ,ಜೋಗ ಜಲಪಾತ,ಗೋಕರ್ಣ,ಹಳೇಬೀಡು,ಬೇಲೂರು,ಸೋಮನಾಥ ಪುರ,ಬಾದಾಮಿ,ಐಹೊಳೆ,ಬಿಜಾಪುರದ ಗೋಲ್ ಗುಂಬಸ್,ಶ್ರವಣ ಬೆಳಗೊಳ,ಪಶ್ಚಿಮ ಘಟ್ಟದ ಕಾಡುಗಳು,ಮೈಸೂರು,ಇತ್ಯಾದಿ..ನೋಡಲು ನಯನ ಮನೋಹರವಾಗಿದೆ.ಇವೆಲ್ಲವು ಮಾನವ ಮತ್ತು ನಿಸರ್ಗ ನಿರ್ಮಿತ ಅಮೂಲ್ಯ ಆಸ್ತಿಗಳಾಗಿವೆ.
ಬೆಂಗಳೂರು, ಭಾರತದ ಸಿಲಿಕಾನ್ ಕಣಿವೆ(ಸಾಫ್ಟ್ ವೇರ್ ಉದ್ಯಮದ ರಾಜಧಾನಿ) ಎಂದು ಪ್ರಖ್ಯಾತವಾಗಿದೆ. ಭಾರತದ ಐಟಿ ಕ್ರಾಂತಿಗೆ ಕಾರಣರಾದ,ಇನ್ಫ಼ೊಸಿಸ್ ಸಂಸ್ಥೆಯ ನಿರ್ಮಾತ್ರುಗಳಾದ ನಾರಯಣ ಮೂರ್ತಿ ನಮ್ಮಕನ್ನಡಿಗರು ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯ.ವಿಶ್ವದ ಅನೇಕ ಪ್ರಸಿದ್ಧ ಕಂಪನಿಗಳು,ಬೆಂಗಳೂರಿನಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ. ಕ್ರೀಡಾಕ್ಶೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ.
ಭಾರತದ ಕ್ರೀಡಾಕ್ಶೇತ್ರಕ್ಕೆ ಕರ್ನಾಟಕದ ಕೊಡುಗೆಯಲ್ಲಿ ಪ್ರಮುಖರೆಂದರೆ ಪ್ರಕಾಶ್ ಪಡುಕೋಣೆ,ಪಂಕಜ್ ಅಡ್ವಾಣಿ,ಅನಿಲ್ ಕುಂಬ್ಳೆ,ರಾಹುಲ್ ದ್ರಾವಿಡ್,ಅಶ್ವಿನಿ ನಾಚಪ್ಪ,ಮುಂತಾದವರು.. !!
ಇಷ್ಟೆಲ್ಲಾ ಪರಂಪರೆ, ಪ್ರಸಿದ್ಧಿ, ಸಂಸ್ಕೃತಿ ಇರುವ ಕರ್ನಾಟಕದಲ್ಲಿ ಜನಿಸಿರುವ ನಾವು ನಿಜಕ್ಕೂ ಧನ್ಯ.. ಧನ್ಯ !!!
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು..!!"
ಅಂತ ನಮ್ಮ ಸಂಗೀತ ಬ್ರಹ್ಮ "ಹಂಸಲೇಖ" ರಚಿಸಿರುವ ಮತ್ತುನಮ್ಮ ಕನ್ನಡ ಕಂಠೀರವ, ಪದ್ಮಭೂಷಣ, ಗಾನ ಗಂಧರ್ವ, "ಡಾ ರಾಜಕುಮಾರ್" ಹಾಡಿರುವ ಗೀತೆ ನಿಜಕ್ಕೂ ಸತ್ಯ ಮತ್ತು ನಿತ್ಯ ...!
ಕನ್ನಡವೇ ಸತ್ಯ ...ಕನ್ನಡವೇ ನಿತ್ಯ !!!